ಬುಧವಾರ, ಮಾರ್ಚ್ 11, 2009

ನನ್ನ ಕಾಲೇಜಿನ ಮೊದಲ ದಿನಗಳು..

ನನ್ನ ಕಾಲೇಜಿನ ಆರಂಭದ ದಿನಗಳ ಬಗ್ಗೆ ಬರೆಯುತ್ತಿದ್ದೇನೆ . ನನ್ನ ಪ್ರಕಾರ ನನ್ನ ಈ 15 ವರ್ಷಗಳ ಜೀವನದಲ್ಲಿ ನನ್ನಲ್ಲಿ ಏಕಾಂಗಿತನ ಅತಿಯಾಗಿ ಕಾಡಿದ್ದು ಈ ಸಮಯದಲ್ಲೇ . ನಾನು LKG ಇಂದ ಒಂದೇ ಸ್ಕೂಲ್ನಲ್ಲೇ ಅಧ್ಯಯನ ಮಾಡಿದ್ದರಿಂದ ನನಗೆ ಆ ಸ್ಕೂಲ್ ಬಿಟ್ಟು ಹೋಗುವ ಪ್ರಸಂಗ ಒದಗಿ ಬಂದಿರಲಿಲ್ಲ . ಹಾಗಾಗಿ ನಾನು ಮೊದಲ ಬಾರಿಗೆ ನನ್ನ ಶಾಲೆ , ಅಲ್ಲಿನ ನನ್ನ ಗುರುಗಳನ್ನು ಬಿಟ್ಟು ಬಂದಾಗ ನನಗಾದ ನೋವು ಅಷ್ಟಿಷ್ಟಲ್ಲ. ಅಲ್ಲದೆ ನನ್ನ ಬಾಲ್ಯದ ಒಡನಾಡಿಗಳನ್ನು ಅಗಲಿ ,ನನ್ನ ತಂದೆ -ತಾಯಿಗಳನ್ನು ಬಿಟ್ಟು ಬರುವುದು ಮನಸ್ಸಿಗೆ ತುಂಬ ಕಷ್ಟವೆನಿಸಿತು . 

ನಾನು ಮೊದಲ ದಿನ ಕಾಲೇಜ್ ಗೆ ಹೋದಾಗ ಎಲ್ಲವು ಅಪರಿಚಿತ ಮುಖಗಳೇ . ಆ ಒಂದು ಕ್ಷಣ ಮನಸ್ಸು ಭಾರವೆನಿಸಿ ದುಖ ಒತ್ತಿ ಬಂದಿತು . ಅಲ್ಲದೆ ನನ್ನ ಎಲ್ಲ ಗೆಳತಿಯರು ನೆನಪಾಗತೊಡಗಿದರು . ಆಗ ಒಮ್ಮೆಲೇ "ನಾನು ಏಕಾದರೂ ಇಲ್ಲಿಗೆ ಬಂದೆನೋ" ಎಂಬ ಯೋಚನೆ ಸುಳಿಯಿತು . ಅಲ್ಲಿ ಎಲ್ಲರು ಉಡುಪಿಯವರೇ ಆಗಿದ್ದರಿಂದ ಅವರೆಲ್ಲರೂ ತಮ್ಮ -ತಮ್ಮ ಗೆಳೆಯ / ತಿಯರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು . ಅಲ್ಲದೆ ಮನಸ್ಸಿನಾಳದಲ್ಲಿ ಸಣ್ಣದಾಗಿ ಮತ್ಸರವೂ ಮೂಡಿತು .ಅ ಸಂದರ್ಭದಲ್ಲಿ ನಾನು ಒಬ್ಬ ಸೂಕ್ತ ಗೆಳತಿಗಾಗಿ ಹಂಬಲಿಸುತಿದ್ದೆ . ಆದರೆ ಇತರರು ತಮ್ಮ ಗೆಳತಿಯರನ್ನು ಹೊಂದಿದ್ದರಿಂದ ನನ್ನ ಕಡೆ ಯಾರು ತಿರುಗಿ ನೋಡಲಿಲ್ಲ .ಆಗ ಒಬ್ಬಳು ಬಂದು ನನ್ನೊಟ್ಟಿಗೆ ಕುಳಿತು ಮಾತನಾಡಿಸಿದಳು . ಅವಳು ಸಹ ಕನ್ನಡ ಮಾಧ್ಯಮದವಳೇ ಆಗಿದ್ದರಿಂದ ನಮ್ಮಿಬ್ಬರ ಸಂಭಾಷಣೆಗೆ ಯಾವುದೇ ಅಡಚಣೆ , ತೊಡಕು ಉಂಟಾಗಲಿಲ್ಲ . ಅವಳು ನಾನು ಬೇರೆ ಕಡೆಯಿಂದ ಬಂದವಳೆಂದು ತಿಳಿದೋ ಉತ್ತಮ ರೀತಿಯಲ್ಲಿಯೇ ನನ್ನ ಬಗ್ಗೆ ವಿಚಾರಿಸಿ , ತನ್ನ ಬಗ್ಗೆಯೋ ತಿಳಿಸಿದಳು . ಆಗ ಒಂದು ಕ್ಷಣ ನನಗೆ ಅತೀವ ಸಂತಸವೆನಿಸಿತು .  

ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ . ಒಬ್ಬ ಲೆಕ್ಟುರೆರ್ ಬಂದು ನಮ್ಮನ್ನು ಎತ್ತರ ಪ್ರಕಾರ ಕೂರಲು ತಿಳಿಸಿದ್ದರಿಂದ ನಾವಿಬ್ಬರು ಬೇರೆ -ಬೇರೆಯಾದೆವು . ನನ್ನ ಪಕ್ಕದಲ್ಲಿ ಇನ್ನೊಬ್ಬಳು ಬಂದು ಕುಳಿತಳು . ನಾನು ಅವಳನ್ನು ಮಾತನಾಡಿಸಲು ಯತ್ನಿಸಿದರೂ ಅವಳು ನನ್ನನ್ನು ಕಡೆಗಣಿಸಿದಳು . ನಂತರ ಭೋಜನ ವಿರಾಮವಿದ್ದಾಗ ಸಹ ಅವಳು ತನ್ನ ಗೆಳತಿಯರೊಂದಿಗೆ ಊಟ ಮಾಡಿದಳು . ಆದರೆ ಅದೇ ಸಂದರ್ಭದಲ್ಲೇ ನಾನು ತಂದಿದ್ದ ಬುತ್ತಿಯಿಂದ ನೀರಿನ ಅಂಶ ಕೆಳಗೆ ಚೆಲ್ಲಿದಾಗ ನನ್ನ ಧೈರ್ಯವು ಕುಂದಿತು . ಎಲ್ಲರು ನನ್ನತ್ತ ನೋಡುತ್ತಿರುವರೆಂದು ಅದೇಕೋ ನನ್ನ ಬಗ್ಗೆ ನಾಚಿಕೆಯನ್ನು ಮೂಡಿಸಿತು .ಅಂದಿನ ಈ ಘಟನೆ ನನ್ನನ್ನು ಸ್ವಲ್ಪ ಪ್ರಮಾಣದಲ್ಲಿ ಖಿನ್ನಗೊಳಿಸಿತು .

ಮರು ದಿವಸ ಬರುವಾಗವೂ ಭಯ ನನ್ನನ್ನು ಆವರಿಸಿತ್ತು . ಅದಲ್ಲದೆ ಅಲ್ಲಿ ಎಲ್ಲರು ಇಂಗ್ಲಿಷ್ನಲ್ಲಿ ಸಂಭಾಷಣೆ ನಡೆಸುತ್ತಿರುವಾಗ ನನಗು ಇಂಗ್ಲಿಷ್ನಲ್ಲಿ ಮಾತನಾಡಬೇಕೆಂಬ ಹಂಬಲವಾಗುತಿತ್ತು .ಬಿಸಿನೆಸ್ ಲೆಕ್ಟುರೆರ್ ಬಂದು ಸಂಪೂರ್ಣವಾಗಿ ಇಂಗ್ಲಿಷ್ನಲ್ಲಿ ಪರಿಚಯ ಮಾಡಿಕೊಂಡಾಗ ನನ್ನ ಮನಸ್ಸಿನಲ್ಲಿ ಆ ವಿಷಯದ ಬಗ್ಗೆ ಪೂರ್ವಗ್ರಹ ಮೂಡಿ ಅದು ಕ್ಲಿಷ್ಟಕರವೆಂದು ಭಯ ಬೇರೂರಿತು .  

ಇದೆ ರೀತಿಯ ಮನಸ್ತಿತಿಯು ಸುಮಾರು 2-3 ವಾರಗಳ ಕಾಲ ನನ್ನಲ್ಲೇ ಮನೆ ಮಾಡಿತ್ತು . ಅದರಿಂದ ಹೊರಬರುವುದು ಕೊಂಚ ಕಷ್ಟವೇ ಎನಿಸಿತು . ಆಗ ನನ್ನ ಮನಸ್ಸನ್ನು ಗಟ್ಟಿಗೊಳಿಸಿದೆ . ಅದೇ ಸಂದರ್ಭದಲ್ಲಿ ಕಿರು ಪರೀಕ್ಷೆಯನ್ನು ಘೋಷಿಸಿದ್ದರಿಂದ ನಾನು ಅದಕ್ಕಾಗೆ ಸಿದ್ಧತೆ ನಡೆಸಿದೆ . ಅಲ್ಲದೆ ಈ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವ ಮೂಲಕ ನನ್ನ ಇರುವಿಕೆಯನ್ನು ಎಲ್ಲರು ಗುರುತಿಸಲಿ ಎಂಬ ಆಶಯದೊಂದಿಗೆ ನಾನು ತಯಾರಾದೆ . ಕಠಿಣ ಪರಿಶ್ರಮ ವಹಿಸಿ ಉತ್ತಮ ಅಂಕಗಳನ್ನೇನೋ ಪಡೆದೆ . ಆದರೆ business ವಿಷಯದಲ್ಲಿ ಮಾತ್ರ ನನ್ನಲ್ಲಿರುವ ಭಯವೇ ಗೆಲುವು ಸಾಧಿಸಿ ನನ್ನನ್ನು ಸೋಲಿಸಿತ್ತು . ನನಗೆ ಅದರ ವಿರುದ್ಧ ಹೊರಾಡಲಾಗಲಿಲ್ಲ . ಇತರ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ಸಂತೋಷವನ್ನು ಈ ನನ್ನ ಸೋಲೇ ಮುಚ್ಚಿ ಹಾಕಿತು . ಅಲ್ಲದೆ ಅದು ನನ್ನ ಜೀವಮಾನದಲ್ಲೇ ಪಡೆದ ಅತ್ಯಂತ ಕನಿಷ್ಠ ಅಂಕವಾಗಿತ್ತು .

ನಂತರ ಸ್ವಲ್ಪ ದಿನಗಳಲ್ಲೇ ಈ ಘಟನೆಯನ್ನು ನನ್ನ ನೆನಪಿನ ಬುಟ್ಟಿ ಇಂದ ಹೊರಹಾಕಿದೆ ಕಾರಣ ನನ್ನ ತರಗತಿಯ ಹೆಚ್ಚು ಪಾಲಿನವರು ನನ್ನಷ್ಟೇ ಅಂಕ ಗಳಿಸಿದ್ದರು . ಅಲ್ಲದೆ ನನ್ನ ಜೊತೆ ಕುಲಿತುಕೊಳ್ಳುವವಳು ನಂತರದಲ್ಲಿ ಸ್ನೇಹಮಯ ಮಾತುಗಳಿಂದ ಮಾತನಾಡಿಸಿದಳು . ಅ ಮಾತುಗಳೇ ನನ್ನಲ್ಲಿ ಉತ್ಸಾಹವನ್ನು ತುಂಬಿದವು . ಒಬ್ಬ ಇಂಗ್ಲಿಷ್ ಮಾಧ್ಯಮದವಳ ಅಂಕಕ್ಕೆ ಸಮನಾಗಿ ನಾನು ಅಂಕ ಗಳಿಸಿದ್ದು ನನ್ನ ಆತ್ಮ ವಿಶ್ವಾಸವನ್ನು ವ್ರುದ್ಧಿಗೊಲಿಸಿತು . ಈ ಪರೀಕ್ಷೆಯ ನಂತರ ಮೊದಲಿದ್ದ ಭಯ ನನ್ನ ಮನಸ್ಸಿನಿಂದ ಬೇರೆ ಕಡೆ ಪ್ರಯಾಣ ನಡೆಸಿತ್ತು . ಹಾಗಾಗಿ ಆ ಭಯದಿಂದ ನಾನು ಮುಕ್ತಿ ಹೊಂದಿದೆ .

ಹೀಗೆ ನನ್ನ ಕಾಲೇಜ್ ಜೀವನ ಆರಂಭವಾಗಿ ಮುಂದೆ ನಾನು ಕಾಲೇಜಿನ ಕಡೆ ಹೆಚ್ಚಿನ ಆಸಕ್ತಿ ವಹಿಸಲು ಮೊದಲು ಮಾಡಿದೆ . ಮುಂದುವರಿಯಲಿದೆ... 
-- ರಮ್ಯ ರಾವ್