ಬುಧವಾರ, ಫೆಬ್ರವರಿ 3, 2010

Jan 26: ನಾವು ಜವಾಬ್ದಾರರಲ್ಲ

ನಮಸ್ತೆ,
ಜನವರಿ ತಿಂಗಳು ಕಳೆಯಿತು. ಆದರು ಎಲ್ಲೊ ಏನೋ ತಪ್ಪಿ ಹೋದಂತೆ ನಮ್ಮ ದೇಶದ ಜನತೆಯಲ್ಲಿ ಕಾಣುತ್ತಿದ್ದೇವೆ. ಗಣರಾಜ್ಯೋತ್ಸವದ ಅರ್ಥ ನಾವು ಬೇಕೆಂದೇ ಮರೆಯುತ್ತಿರುವೆಯೋ? ವಿಜಯ ಕರ್ನಾಟಕ ಫೆಬ್. ೩ ೨೦೧೦ ರ ಅನಿಸಿಕೆ ಲೇಖನ image ನೋಡಿ.
ವಂದೇ ಮಾತರಂ

ಮಂಗಳವಾರ, ಜನವರಿ 12, 2010

Naaveke heege?

ನಮಸ್ತೆ,
ಸಾಮಾಜಿಕ ಜವಾಬ್ದಾರಿಯ ಬಗೆಗೆ ನಮ್ಮ ಕಾಳಜಿ ಎಷ್ಟಿದೆ? ಕೆಳಗಿನ link ನೋಡಿ. ವಿಜಯ ಕರ್ನಾಟಕ ಜ. 7 ರ "ನೂರೆಂಟು ಮಾತು" ಅಂಕಣ
https://acrobat.com/#d=boozMz0EAhS5xP73RZbEhg

ಬುಧವಾರ, ಜೂನ್ 24, 2009

ನಮ್ಮೂರ ATM ನಮ್ಮ ಬಳಕೆಗೆ ತಾನೇ ??

By Mail...

ಈಗ೦ತೂ ಎಲ್ಲಾರೂ ಎಟಿಎಂ ಸೌಲಭ್ಯ ಬಳಸುತ್ತಿದ್ದಾರೆ. ಹಾಗೆಯೇ ಎಟಿಎಂನ ಕೀಗಳನ್ನು ಒತ್ತುವಾಗ ಯ೦ತ್ರದಲ್ಲಿ ಕನ್ನಡದ ಆಯ್ಕೆ ಇದ್ದಿದ್ದ್ರೆ ಚೆನ್ನಾಗಿರುತ್ತಿತ್ತು... ಅನ್ಕೊ೦ಡು ಸುಮ್ಮನಾಗೋರು ಕೂಡಾ ಸಾಕಷ್ಟು ಮ೦ದಿ ಇದ್ದಾರೆ. ಆದರೆ ಕರ್ನಾಟಕದಲ್ಲಿ ಬ್ಯಾ೦ಕ್ ಗಳು ಇ೦ತಹ ಮೂಲಭೂತವಾದ ಸೇವೆಗಳನ್ನೂ ಸಹ ಕನ್ನಡದಲ್ಲಿ ಕೊಡದೆ ಇರುವುದು ನಿಜವಾಗಲೂ ದುಃಖದ ಸ೦ಗತಿ. ಕರ್ನಾಟಕದಲ್ಲಿ ಸಿಟಿ ಬ್ಯಾ೦ಕ್ ನ ಹಲವಾರು ಎ.ಟಿ.ಎ೦ ಬ್ರಾ೦ಚ್ ಗಳಿವೆ. ಆದರೆ ಯಾವುದರಲ್ಲೂ ಕನ್ನಡದ ಆಯ್ಕೆಯನ್ನು ಇಟ್ಟಿಲ್ಲ. ಕನ್ನಡಿಗರು ಹೇಗಿದ್ದರೂ ಒತ್ತಾಯ ಮಾಡುವುದಿಲ್ಲ, ಎ.ಟಿ.ಎ೦ ನಲ್ಲಿ ಯಾವ ಭಾಷೆನಲ್ಲಿ ಇದ್ದರೇನು ಅನ್ನೋ ತಪ್ಪು ಕಲ್ಪನೆ ಇವರದು. ಸಿಟಿ ಬ್ಯಾಂಕಿಗೆ ಕರೆ ನೀಡಿ ಮಾತಾಡಬೇಕಾದ್ರೆ ಅದರಲ್ಲಿ ಕನ್ನಡದ ಆಯ್ಕೆ ಇಲ್ಲ. ಅಲ್ಲಿ ನೀವು ಇ೦ಗ್ಲೀಷ್, ತಮಿಳು, ತೆಲುಗು ಅಥವಾ ಹಿ೦ದಿನಲ್ಲಿ ಮಾತಾಡದೇ ಬೇರೆ ದಾರಿನೇ ಇಲ್ಲ. ಈ ಬ್ಯಾ೦ಕ್ ಗಳ ಗ್ರಾಹಕಸೇವಾ ವಿಭಾಗದಲ್ಲಿ ಕರೆ ನೀಡಿದರೆ ಅದು ಆ೦ಧ್ರಾಗೋ, ತಮಿಳುನಾಡಿಗೋ ಮತ್ತೆಲ್ಲಿಗೋ ವರ್ಗಾಯಿಸುತ್ತಾರೆ. ಅಲ್ಲಿಯ ಅಧಿಕಾರಿಗಳು ಕನ್ನಡದಲ್ಲಿ ಸೇವೆ ನೀಡಲು ನಿರಾಕರಿಸುವುದಲ್ಲದೇ, ತೆಲುಗು, ತಮಿಳು ಅಥವಾ ಹಿ೦ದಿಯಲ್ಲಿ ಮಾತನಾಡಿ ಎಂದು ಸೂಚಿಸುತ್ತಾರೆ. ಗ್ರಾಹಕ ಅಕ್ಕಿ ಕೇಳಿದರೆ, ಗೋಧಿ ಕೊಡೋ ಸರ್ಕಾರಿ ನ್ಯಾಯಬೆಲೆ ಅಂಗಡಿಯವರಿಗೂ, ಈ ಬ್ಯಾಂಕಿನವರಿಗೂ ಏನೂ ವ್ಯತ್ಯಾಸವಿಲ್ಲ. ಬ್ಯಾ೦ಕ್ ನ ಈ ನೀತಿಯನ್ನು ಕನ್ನಡಿಗರು ಒಪ್ಪಿರುವುದರಿ೦ದ, ಒ೦ದು ಕಡೆ ಕನ್ನಡದಲ್ಲಿ ಸೇವೆ ಸಿಗುತ್ತಿಲ್ಲ, ಮತ್ತೊ೦ದು ಕಡೆ ಕನ್ನಡಿಗರಿಗೆ ಸಿಗೋ ಉದ್ಯೋಗಾವಕಾಶಾನೂ ಕೈತಪ್ಪಿಹೋಗುತ್ತಿದೆ. RBI ಪ್ರಕಾರ ಕನ್ನಡದಲ್ಲಿ ಸೇವೆ ನೀಡಬೇಕೆ೦ಬ ಕಾನೂನಿದ್ದರೂ ಸಹ... ನಿಮ್ಮಲ್ಲಿ ಯಾರಾದರೂ ಕನ್ನಡದಲ್ಲಿ ಚೆಕ್ ಬರೆದು ಹಾಕಿ ನೋಡೋಣ, ಮಾರನೆ ದಿನನೇ ಅದನ್ನು ಬೌನ್ಸ್ ಮಾಡಿ ಅದಕ್ಕೆ ಫೈನ್ ಹಾಕುತ್ತಾರೆ. ಒಟ್ಟಿನಲ್ಲಿ ಕನ್ನಡದಲ್ಲಿ ಸೇವೆ ಕೇಳುವುದು ಒ೦ದು ಅಪರಾಧ ಅನ್ನೋ ಮಟ್ಟಿಗೆ ಇವರ ಗ್ರಾಹಕ ಸೇವಾ ನೀತಿಗಳು ಇವೆ. ಇದು ಹೀಗೇ ಮು೦ದುವರಿದರೆ ಬ್ಯಾ೦ಕಿ೦ಗ್ ಕ್ಷೇತ್ರದಲ್ಲಿ ಕನ್ನಡವನ್ನು ತರಲು ಸಾಧ್ಯವೇ ಆಗದ ಪರಿಸ್ಥಿತಿ ಬರುತ್ತದೆ. ಐಸಿಐಸಿಐ, ಎಕ್ಸಿಸ್ , ಕೆನರಾ ಬ್ಯಾಂಕ್ ಮು೦ತಾದ ಬ್ಯಾಂಕುಗಳು ತಮ್ಮ ಎ.ಟಿ.ಎಂ ಗಳಲ್ಲಿ ಕನ್ನಡದಲ್ಲಿ ಸೇವೆ ಅಳವಡಿಸಿಕೊ೦ಡಿದ್ದಾರೆ. ಸ್ವಲ್ಪ ಮಟ್ಟಿಗೆ ಗ್ರಾಹಕ ಸೇವೆಯನ್ನೂ ಸಹ ಕನ್ನಡದಲ್ಲಿ ಕೊಡುತ್ತಿದ್ದಾರೆ. ಆದರೆ ಇದನ್ನು ಪ್ರತಿಬಾರಿಯೂ ಬಳಸುವುದು ನಮ್ಮ ಜವಾಬ್ದಾರಿಯಾಗಿದೆ. ಆಫ್ರಿಕಾ ಖಂಡದ ಒಂದು ದೇಶದಲ್ಲಿ ಒಟ್ಟು ೮ ಭಾಷೆಗಳಲ್ಲಿ ಎಟಿಎಂ ಸೌಲಭ್ಯವಿದೆ. ಇದನ್ನು ನೋಡಿದಮೇಲೆ, ಕರ್ನಾಟಕದಲ್ಲಿ ಕೋಟ್ಯಾ೦ತರ ರೂಪಾಯಿ ವ್ಯಾಪಾರ ವಹಿವಾಟು ನಡೆಸುವ ಈ ಸಿಟಿ ಬ್ಯಾಂಕಿನವರ "ಕನ್ನಡದಲ್ಲಿ ಸೇವೆ ಕೇಳಬೇಡಿ" ಎಂಬ ಧೋರಣೆಯನ್ನು ಕನ್ನಡದ ಗ್ರಾಹಕ ಯಾಕೆ ಪ್ರಶ್ನಿಸಬಾರದು? ಕನ್ನಡದ ಗ್ರಾಹಕನು ತಮ್ಮ ಭಾಷೆಯಲ್ಲಿ ಸೇವೆ ಪಡೆಯುವ ಹಕ್ಕು ತಮಗೆ ಕಾನೂನು ಸಹಜವಾಗಿಯೇ ನೀಡಿದೆ ಎ೦ಬ ನಿಜಾ೦ಶವನ್ನು ಅರಿತುಕೊಳ್ಳಬೇಕಾಗಿದೆ. ಇನ್ನು ಕಾಯುವುದು ಬೇಡ, ಮು೦ದಿನ ದಿನಗಳಲ್ಲಿ ನಿಮಗೆ ಭಾಷಾ ಆಯಾಮದಲ್ಲಿ ಈ ಬ್ಯಾ೦ಕ್ ಗಳಿ೦ದ ತೊ೦ದರೆಯಾದರೆ ಅವರಿಗೆ ಖ೦ಡಿತ ಬರೆದು ತಿಳಿಸಿ. ಈ ಬರೆಯುವ ಪ್ರಕ್ರಿಯೆಯಿ೦ದಲೇ ಬದಲಾವಣೆ ತರಲು ಸಾಧ್ಯ. ಎ.ಟಿ.ಎ೦ ಯ೦ತ್ರದ ಬಟನ್ ಒತ್ತುವಾಗ, ಬ್ಯಾ೦ಕ್ ನ ಕರೆಗಳನ್ನು ಸ್ವೀಕರಿಸುವಾಗ ಅಥವಾ ಬ್ಯಾ೦ಕ್ ನ ಜೊತೆ ಪತ್ರ ವ್ಯವಹಾರ ಎಲ್ಲಕ್ಕೂ ಕನ್ನಡವನ್ನೇ ಬಳಸಿರಿ. ನಮ್ಮ ಭಾಷೆಯನ್ನು ಉಳಿಸುವುದಲ್ಲದೇ ಕನ್ನಡವನ್ನು ಒ೦ದು ಅನ್ನ ಕೊಡುವ ಭಾಷೆಯಾಗಿ ಮಾಡುವ ಶಕ್ತಿ ಈಗ ನಿಮ್ಮ ಕೈಯಲ್ಲಿದೆ ಎ೦ಬುದನ್ನು ಮರೆಯಬೇಡಿ. ಸಿಟಿ ಬ್ಯಾ೦ಕ್ ಗೆ ಬರೆಯಲು ಈ ವಿಳಾವನ್ನು ಬಳಸಿ - indiaservice@citi.com
ಎಚ್.ಡಿ.ಎಫ್.ಸಿ ಬ್ಯಾ೦ಕ್ - support@hdfcbank.com
ಐಸಿಐಸಿಐ ಬ್ಯಾ೦ಕ್ - customer.care@icicibank.com
ಎ.ಬಿ.ಎನ್ ಆಮ್ರೋ - in.service@in.abnamro.com
ಕಾರ್ಪೊರೇಷನ್ ಬ್ಯಾ೦ಕ್ -cb8803@corpbank.co.in
ಆಕ್ಸಿಸ್ ಬ್ಯಾ೦ಕ್ - szh@axisbank.com


ಬುಧವಾರ, ಮಾರ್ಚ್ 11, 2009

ನನ್ನ ಕಾಲೇಜಿನ ಮೊದಲ ದಿನಗಳು..

ನನ್ನ ಕಾಲೇಜಿನ ಆರಂಭದ ದಿನಗಳ ಬಗ್ಗೆ ಬರೆಯುತ್ತಿದ್ದೇನೆ . ನನ್ನ ಪ್ರಕಾರ ನನ್ನ ಈ 15 ವರ್ಷಗಳ ಜೀವನದಲ್ಲಿ ನನ್ನಲ್ಲಿ ಏಕಾಂಗಿತನ ಅತಿಯಾಗಿ ಕಾಡಿದ್ದು ಈ ಸಮಯದಲ್ಲೇ . ನಾನು LKG ಇಂದ ಒಂದೇ ಸ್ಕೂಲ್ನಲ್ಲೇ ಅಧ್ಯಯನ ಮಾಡಿದ್ದರಿಂದ ನನಗೆ ಆ ಸ್ಕೂಲ್ ಬಿಟ್ಟು ಹೋಗುವ ಪ್ರಸಂಗ ಒದಗಿ ಬಂದಿರಲಿಲ್ಲ . ಹಾಗಾಗಿ ನಾನು ಮೊದಲ ಬಾರಿಗೆ ನನ್ನ ಶಾಲೆ , ಅಲ್ಲಿನ ನನ್ನ ಗುರುಗಳನ್ನು ಬಿಟ್ಟು ಬಂದಾಗ ನನಗಾದ ನೋವು ಅಷ್ಟಿಷ್ಟಲ್ಲ. ಅಲ್ಲದೆ ನನ್ನ ಬಾಲ್ಯದ ಒಡನಾಡಿಗಳನ್ನು ಅಗಲಿ ,ನನ್ನ ತಂದೆ -ತಾಯಿಗಳನ್ನು ಬಿಟ್ಟು ಬರುವುದು ಮನಸ್ಸಿಗೆ ತುಂಬ ಕಷ್ಟವೆನಿಸಿತು . 

ನಾನು ಮೊದಲ ದಿನ ಕಾಲೇಜ್ ಗೆ ಹೋದಾಗ ಎಲ್ಲವು ಅಪರಿಚಿತ ಮುಖಗಳೇ . ಆ ಒಂದು ಕ್ಷಣ ಮನಸ್ಸು ಭಾರವೆನಿಸಿ ದುಖ ಒತ್ತಿ ಬಂದಿತು . ಅಲ್ಲದೆ ನನ್ನ ಎಲ್ಲ ಗೆಳತಿಯರು ನೆನಪಾಗತೊಡಗಿದರು . ಆಗ ಒಮ್ಮೆಲೇ "ನಾನು ಏಕಾದರೂ ಇಲ್ಲಿಗೆ ಬಂದೆನೋ" ಎಂಬ ಯೋಚನೆ ಸುಳಿಯಿತು . ಅಲ್ಲಿ ಎಲ್ಲರು ಉಡುಪಿಯವರೇ ಆಗಿದ್ದರಿಂದ ಅವರೆಲ್ಲರೂ ತಮ್ಮ -ತಮ್ಮ ಗೆಳೆಯ / ತಿಯರೊಂದಿಗೆ ಸಂಭಾಷಣೆಯಲ್ಲಿ ತೊಡಗಿದ್ದರು . ಅಲ್ಲದೆ ಮನಸ್ಸಿನಾಳದಲ್ಲಿ ಸಣ್ಣದಾಗಿ ಮತ್ಸರವೂ ಮೂಡಿತು .ಅ ಸಂದರ್ಭದಲ್ಲಿ ನಾನು ಒಬ್ಬ ಸೂಕ್ತ ಗೆಳತಿಗಾಗಿ ಹಂಬಲಿಸುತಿದ್ದೆ . ಆದರೆ ಇತರರು ತಮ್ಮ ಗೆಳತಿಯರನ್ನು ಹೊಂದಿದ್ದರಿಂದ ನನ್ನ ಕಡೆ ಯಾರು ತಿರುಗಿ ನೋಡಲಿಲ್ಲ .ಆಗ ಒಬ್ಬಳು ಬಂದು ನನ್ನೊಟ್ಟಿಗೆ ಕುಳಿತು ಮಾತನಾಡಿಸಿದಳು . ಅವಳು ಸಹ ಕನ್ನಡ ಮಾಧ್ಯಮದವಳೇ ಆಗಿದ್ದರಿಂದ ನಮ್ಮಿಬ್ಬರ ಸಂಭಾಷಣೆಗೆ ಯಾವುದೇ ಅಡಚಣೆ , ತೊಡಕು ಉಂಟಾಗಲಿಲ್ಲ . ಅವಳು ನಾನು ಬೇರೆ ಕಡೆಯಿಂದ ಬಂದವಳೆಂದು ತಿಳಿದೋ ಉತ್ತಮ ರೀತಿಯಲ್ಲಿಯೇ ನನ್ನ ಬಗ್ಗೆ ವಿಚಾರಿಸಿ , ತನ್ನ ಬಗ್ಗೆಯೋ ತಿಳಿಸಿದಳು . ಆಗ ಒಂದು ಕ್ಷಣ ನನಗೆ ಅತೀವ ಸಂತಸವೆನಿಸಿತು .  

ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ . ಒಬ್ಬ ಲೆಕ್ಟುರೆರ್ ಬಂದು ನಮ್ಮನ್ನು ಎತ್ತರ ಪ್ರಕಾರ ಕೂರಲು ತಿಳಿಸಿದ್ದರಿಂದ ನಾವಿಬ್ಬರು ಬೇರೆ -ಬೇರೆಯಾದೆವು . ನನ್ನ ಪಕ್ಕದಲ್ಲಿ ಇನ್ನೊಬ್ಬಳು ಬಂದು ಕುಳಿತಳು . ನಾನು ಅವಳನ್ನು ಮಾತನಾಡಿಸಲು ಯತ್ನಿಸಿದರೂ ಅವಳು ನನ್ನನ್ನು ಕಡೆಗಣಿಸಿದಳು . ನಂತರ ಭೋಜನ ವಿರಾಮವಿದ್ದಾಗ ಸಹ ಅವಳು ತನ್ನ ಗೆಳತಿಯರೊಂದಿಗೆ ಊಟ ಮಾಡಿದಳು . ಆದರೆ ಅದೇ ಸಂದರ್ಭದಲ್ಲೇ ನಾನು ತಂದಿದ್ದ ಬುತ್ತಿಯಿಂದ ನೀರಿನ ಅಂಶ ಕೆಳಗೆ ಚೆಲ್ಲಿದಾಗ ನನ್ನ ಧೈರ್ಯವು ಕುಂದಿತು . ಎಲ್ಲರು ನನ್ನತ್ತ ನೋಡುತ್ತಿರುವರೆಂದು ಅದೇಕೋ ನನ್ನ ಬಗ್ಗೆ ನಾಚಿಕೆಯನ್ನು ಮೂಡಿಸಿತು .ಅಂದಿನ ಈ ಘಟನೆ ನನ್ನನ್ನು ಸ್ವಲ್ಪ ಪ್ರಮಾಣದಲ್ಲಿ ಖಿನ್ನಗೊಳಿಸಿತು .

ಮರು ದಿವಸ ಬರುವಾಗವೂ ಭಯ ನನ್ನನ್ನು ಆವರಿಸಿತ್ತು . ಅದಲ್ಲದೆ ಅಲ್ಲಿ ಎಲ್ಲರು ಇಂಗ್ಲಿಷ್ನಲ್ಲಿ ಸಂಭಾಷಣೆ ನಡೆಸುತ್ತಿರುವಾಗ ನನಗು ಇಂಗ್ಲಿಷ್ನಲ್ಲಿ ಮಾತನಾಡಬೇಕೆಂಬ ಹಂಬಲವಾಗುತಿತ್ತು .ಬಿಸಿನೆಸ್ ಲೆಕ್ಟುರೆರ್ ಬಂದು ಸಂಪೂರ್ಣವಾಗಿ ಇಂಗ್ಲಿಷ್ನಲ್ಲಿ ಪರಿಚಯ ಮಾಡಿಕೊಂಡಾಗ ನನ್ನ ಮನಸ್ಸಿನಲ್ಲಿ ಆ ವಿಷಯದ ಬಗ್ಗೆ ಪೂರ್ವಗ್ರಹ ಮೂಡಿ ಅದು ಕ್ಲಿಷ್ಟಕರವೆಂದು ಭಯ ಬೇರೂರಿತು .  

ಇದೆ ರೀತಿಯ ಮನಸ್ತಿತಿಯು ಸುಮಾರು 2-3 ವಾರಗಳ ಕಾಲ ನನ್ನಲ್ಲೇ ಮನೆ ಮಾಡಿತ್ತು . ಅದರಿಂದ ಹೊರಬರುವುದು ಕೊಂಚ ಕಷ್ಟವೇ ಎನಿಸಿತು . ಆಗ ನನ್ನ ಮನಸ್ಸನ್ನು ಗಟ್ಟಿಗೊಳಿಸಿದೆ . ಅದೇ ಸಂದರ್ಭದಲ್ಲಿ ಕಿರು ಪರೀಕ್ಷೆಯನ್ನು ಘೋಷಿಸಿದ್ದರಿಂದ ನಾನು ಅದಕ್ಕಾಗೆ ಸಿದ್ಧತೆ ನಡೆಸಿದೆ . ಅಲ್ಲದೆ ಈ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುವ ಮೂಲಕ ನನ್ನ ಇರುವಿಕೆಯನ್ನು ಎಲ್ಲರು ಗುರುತಿಸಲಿ ಎಂಬ ಆಶಯದೊಂದಿಗೆ ನಾನು ತಯಾರಾದೆ . ಕಠಿಣ ಪರಿಶ್ರಮ ವಹಿಸಿ ಉತ್ತಮ ಅಂಕಗಳನ್ನೇನೋ ಪಡೆದೆ . ಆದರೆ business ವಿಷಯದಲ್ಲಿ ಮಾತ್ರ ನನ್ನಲ್ಲಿರುವ ಭಯವೇ ಗೆಲುವು ಸಾಧಿಸಿ ನನ್ನನ್ನು ಸೋಲಿಸಿತ್ತು . ನನಗೆ ಅದರ ವಿರುದ್ಧ ಹೊರಾಡಲಾಗಲಿಲ್ಲ . ಇತರ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ಸಂತೋಷವನ್ನು ಈ ನನ್ನ ಸೋಲೇ ಮುಚ್ಚಿ ಹಾಕಿತು . ಅಲ್ಲದೆ ಅದು ನನ್ನ ಜೀವಮಾನದಲ್ಲೇ ಪಡೆದ ಅತ್ಯಂತ ಕನಿಷ್ಠ ಅಂಕವಾಗಿತ್ತು .

ನಂತರ ಸ್ವಲ್ಪ ದಿನಗಳಲ್ಲೇ ಈ ಘಟನೆಯನ್ನು ನನ್ನ ನೆನಪಿನ ಬುಟ್ಟಿ ಇಂದ ಹೊರಹಾಕಿದೆ ಕಾರಣ ನನ್ನ ತರಗತಿಯ ಹೆಚ್ಚು ಪಾಲಿನವರು ನನ್ನಷ್ಟೇ ಅಂಕ ಗಳಿಸಿದ್ದರು . ಅಲ್ಲದೆ ನನ್ನ ಜೊತೆ ಕುಲಿತುಕೊಳ್ಳುವವಳು ನಂತರದಲ್ಲಿ ಸ್ನೇಹಮಯ ಮಾತುಗಳಿಂದ ಮಾತನಾಡಿಸಿದಳು . ಅ ಮಾತುಗಳೇ ನನ್ನಲ್ಲಿ ಉತ್ಸಾಹವನ್ನು ತುಂಬಿದವು . ಒಬ್ಬ ಇಂಗ್ಲಿಷ್ ಮಾಧ್ಯಮದವಳ ಅಂಕಕ್ಕೆ ಸಮನಾಗಿ ನಾನು ಅಂಕ ಗಳಿಸಿದ್ದು ನನ್ನ ಆತ್ಮ ವಿಶ್ವಾಸವನ್ನು ವ್ರುದ್ಧಿಗೊಲಿಸಿತು . ಈ ಪರೀಕ್ಷೆಯ ನಂತರ ಮೊದಲಿದ್ದ ಭಯ ನನ್ನ ಮನಸ್ಸಿನಿಂದ ಬೇರೆ ಕಡೆ ಪ್ರಯಾಣ ನಡೆಸಿತ್ತು . ಹಾಗಾಗಿ ಆ ಭಯದಿಂದ ನಾನು ಮುಕ್ತಿ ಹೊಂದಿದೆ .

ಹೀಗೆ ನನ್ನ ಕಾಲೇಜ್ ಜೀವನ ಆರಂಭವಾಗಿ ಮುಂದೆ ನಾನು ಕಾಲೇಜಿನ ಕಡೆ ಹೆಚ್ಚಿನ ಆಸಕ್ತಿ ವಹಿಸಲು ಮೊದಲು ಮಾಡಿದೆ . ಮುಂದುವರಿಯಲಿದೆ... 
-- ರಮ್ಯ ರಾವ್

ಬುಧವಾರ, ಡಿಸೆಂಬರ್ 31, 2008

ಪಾಂಗಳ ದಿಂದ ಪಿ.ಪಿ.ಸಿ.

ನನಗೆ ಇದು ಹೊಸ ರೀತಿಯ ಅನುಭವ. ಅಂದರೆ ನಮ್ಮ ಮನಯಿಂದ ಬಸ್ ನಿಲ್ದಾಣ, ಅಲ್ಲಿಂದ ಬಸ್ನಲ್ಲಿ ಹೋಗುವುದು ಪ್ರತಿದಿನವೂ ನವೀನ ಅನುಭವ. ೧೦ km ಪಯಣ ನನ್ನ ಚಿಂತನೆಯನ್ನು ಸ್ವತ್ರಂತ್ರತೆಯತ್ತ ಕೊಂಡೊಯ್ಯುವ ದಾರಿಯಾಗಿಬಿಟ್ಟಿತು.

ಆರಂಭದಲ್ಲಿ ಮನೆಯಿಂದ ರಸ್ತೆಯ ನಡುವಿನ ಚಿಕ್ಕ ಹಾಡಿಯನ್ನು ದಾಟುವುದೇ ಭಯವನ್ನು ಎದುರಿಸಿ ನಿಲ್ಲುವ ಮೊದಲ ಹೆಜ್ಜೆ ಆಗಿತ್ತು. ಒಂಟಿಯಾಗಿ ಅ ಹಾಡಿಯ ಹಾದಿಯಲ್ಲಿ ೧೦-೨೦ ಹೆಜ್ಜೆ ಯಾರ ದಾಟುವುದನ್ನು ಅರಗಿಸಿ ಕೊಳ್ಳ ಬೇಕಾಗಿತ್ತು . ನನ್ನೊಂದಿಗೆ ಮತ್ತೊಬ್ಬರು ಬೇಕೆನಿಸುತಿತ್ತು. ಆದರೆ ನಂತರದಲ್ಲಿ ನಾನು ಒಂಟಿತನವನ್ನು ಹಿಮ್ಮೆಟ್ಟಿಸುವ ಮಾರ್ಗವನ್ನು ಕಂಡುಕೊಂಡೆ. ಅಲ್ಲಿಂದಲೇ ಹೊಸ ವಿಚಾರಗಳ ಬಗ್ಗೆ ಚಿಂತಿಸುವುದು, ಅದರೊಂದಿಗೆ ಯಾವುದಾದರು ಹಾಡು ಹೇಳಿಕೊಂಡು ಹೋಗಲು ಆರಂಭಿಸಿದೆ. ಇದರಿಂದ ನನಗೆ ಅನೇಕ ವಿಷಯಗಳ ಬಗ್ಗೆ ಹೊಸ ಯೋಚನೆಗಳು ಮಾಡುತ್ತಿದ್ದವು. ಅದಲ್ಲದೆ ಹಾಡು ಹೇಳುವುದರಿಂದ ನನ್ನ ಸಂಗೀತ ಅಭ್ಯಾಸವು ಸಾಧ್ಯವಾಯಿತು. ಹಸಿರು ವನರಾಶಿಯ ನಡುವೆ ಎದೆಯಾಳದಿಂದ ಹಾಡು ಬರುವುದೇ ನನಗೆ ರೋಮಾಂಚನ ನೀಡಲಾರಂಭಿಸಿತು. ನಮ್ಮ ದೇಶ ಎಂತಹ ಹಸಿರು ಸಂಪತ್ತನ್ನು ಹೊಂದಿದೆ ಎಂದು ಹೆಮ್ಮೆಯಗುತಿತ್ತು. ಕೊನೆಗೆ ಆ ಭಯಂಕರ ಹಾಡಿ ನನ್ನ ದೈನಂದಿನ ಜೀವನದ ಒಂದು ಸುಂದರ ಭಾಗವಾಯಿತು. ಆದರೆ ಈ ಸುಂದರತೆಗೆ ದೃಷ್ಟಿ ಬಿದ್ದಿತು. ಒಂದು ದಿನ ಸಾಯಂಕಾಲ ಕೆಲವೊಂದು ಮರಗಳು ಜೀವ ಕಳೆದು ಕೊಂಡು ಧರೆಶಾಯಿಯಾಗಿದ್ದವು. ತುಂಬ ಬೇಸರವಾಯಿತು. ಹಸಿರೆ ನಮ್ಮ ಉಸಿರಾಗಿರುವಾಗ ಅದನ್ನೇ ನಾಶಪಡಿಸುವ ಜನರ ಕ್ರೂರ ಮನಸ್ಸನ್ನು ಕಂಡು ಕೋಪವು ಬಂದಿತು. ಆದರೆ ನಾನು ಆ ಸಂದರ್ಭದಲ್ಲಿ ಅಸಹಯಕಾಳಗಿದ್ದೆ. ಇಂಥಹ ಅಸಹಾಯಕತೆಗಳನ್ನು ಮೌನವಾಗಿ ಅನುಭವಿಸುವುದನ್ನು ಅಭ್ಯಾಸ ಮಾಡಿಕೊಳ್ಳದೆ ಬೇರೆ ದಾರಿಯು ಸದ್ಯಕ್ಕೆ ಕಾಣುತ್ತಿಲ್ಲ! ಆದರೆ ಎಲ್ಲಿಯವರೆಗೆ ಈ ಅಭ್ಯಾಸ?

ನಂತರ ಬಸ್ನಲ್ಲಿ ಕಾಲೇಜ್ ಗೆ ಹೋಗುವುದು ನನ್ನ ಜೀವನದಲ್ಲೇ ಹೊಸತು. ಬಾಲ್ಯದಿಂದ ನನ್ನ ಶಾಲೆ ಸಮೀಪದಲ್ಲೇ ಇದ್ದುದರಿಂದ ನನಗೆ ಈ ಪ್ರಯಾಣದ ಅನುಭವವಿರಲಿಲ್ಲ. ಆರಂಭದಲ್ಲಿ ನನಗೆ ಭಯ ಕಾಡತೊಡಗಿತ್ತು. ಅಷ್ಟೆ ಅಲ್ಲದೆ ಒಂದು ರೀತಿಯ ಹಿಂಜರಿಕೆ ಇತ್ತು. ಈ ಭಯ ಹಿಂಜರಿಕೆಗಳೇ ಅ ಬಸ್ ಪಯಣದ ಅನುಭವನ್ನು ಆವರಿಸಿಬಿಟ್ಟಿತ್ತು. ಮತ್ತೆ ಆಗ ನಾನು ಒಬ್ಬಳೇ ಆಗಿದ್ದರಿಂದ ಮಾತಾಡಲು ಯಾರೊಬ್ಬರು ಸಿಗುತ್ತಿರಲಿಲ್ಲ. ಇತರರು ಅವರ ಗೆಳೆಯ-ಗೆಳತಿಯರೊಂದಿಗೆ ಮಾತನಾಡುವಾಗ ನಾನೆಲ್ಲೋ ಆ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇನೆ ಅನಿಸುತಿತ್ತು. ಅದೇ ಮುಂದೆ ನನ್ನಲ್ಲಿ ಏಕಾಂಗಿತನದ ಭಾವನೆಯನ್ನು ಮತ್ತಷ್ಟು ವ್ರುದ್ಧಿಗೊಲಿಸಿತು. ಇದಕ್ಕೆ ತಾತ್ಕಾಲಿಕವಾಗಿ ಕಂಡುಕೊಂಡ ಪರಿಹಾರವೆಂದರೆ ನನ್ನ ಗೆಳತಿ ಬರುವ ಬಸ್ನಲ್ಲಿ ಬರುವುದು. ಇದರಿಂದ ನನಗೆ ಒಂಟಿತನ ದೂರವಾಯಿತು. ಅಲ್ಲದೆ ಬಸ್ನಲ್ಲಿ ಅವಳೊಂದಿಗೆ ಹೆಚ್ಚಿನ ವಿಷಯಗಳನ್ನು ಹಂಚಿಕೊಂಡಿದ್ದರಿಂದ ನನಗೆ ಅದಲು. ಆಗಿನಿಂದ ನನ್ನಲ್ಲಿ ಬಸ್ ಪ್ರಯಾಣದ ಬಗ್ಗೆ ಒಲವು ಮಾಡಿತು.

ಆದರೆ ಇಲ್ಲಿಗೆ ಮಾನಸಿಕ ಕ್ಲೇಶಗಳು ಮುಗಿಯಲಿಲ್ಲ. ಬಸ್ನಲ್ಲಿ ಅನೇಕ ಹುಡುಗರು ಜೋರಾಗಿ ಮಾತಾಡುತ್ತಾ, ಹುಡುಗಿಯರ ಕಡೆ ನೋಡಿ ಜೋರಾಗಿ ನಗುತ್ತಿದ್ದರು, ಆಗ ನನ್ನಲ್ಲಿ ನನ್ನ ಬಗ್ಗೆ ಕೀಳರಿಮೆ ಮೂಡಲು ಆರಂಭವಾಯಿತು. ಅಂದರೆ ನನ್ನ ಡ್ರೆಸ್ ಬಗ್ಗೆ ನಗುತ್ತಿರಬಹುದೆಂದು ಭಾವಿಸಿ ಖಿನ್ನಳಗುತ್ತಿದ್ದೆ. ಮನೆಯಲ್ಲಿಯೂ ನನಗೆ ಓದುವಾಗ ಕಾಟ ಕಾಡತೊಡಗಿತು. ಆದರೆ ಇದನ್ನು ನಾನು ಯಾರ ಬಳಿಯೂ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಅವರ ಕೆಟ್ಟ ದೃಷ್ಟಿಯ ಎದುರು ದಿಟ್ಟಿಸಿ ನಿಲ್ಲಲು ಆರಂಭಿಸಿದೆ. ಅಲ್ಲದೆ ನನ್ನಲ್ಲಿ ನನ್ನ ಓದಿನ ಬಗೆಗೆ ಆತ್ಮವಿಶ್ವಾಸ ಇದ್ದುದರಿಂದ ಅದು ನನ್ನಲ್ಲಿನ ಕೀಳರಿಮೆಯನ್ನು ಕಿತ್ತೆಸೆಯಿತು. ಅದರೊಂದಿಗೆ ನಾನು ಅನೇಕ ಗೆಳತಿಯರನ್ನು ಪರಿಚಯ ಮಾಡಿಕೊಳ್ಳತೊಡಗಿದೆ. ಇದರಿಂದಾಗಿ ಅವರ ವಿಚಾರಗಳು ನನಗೆ ದೊರೆಯಿತು. ಅಷ್ಟೆ ಅಲ್ಲದೆ ನನಗೆ ಅನೇಕ ಸಂದರ್ಭಗಳಲ್ಲಿ ನೆರವಾದರು. ಉದಾಹರಣೆಗೆ ಒಮ್ಮೆ ನಮ್ಮ ಬಸ್ ಮಧ್ಯದಲ್ಲಿ ಹಾಳಾಗಿ ನಿಂತಾಗ ನಂಗೆ ಕಾಲೇಜ್ ಗೆ ತಡವಾಗಿದ್ದರಿಂದ ಏನು ಮಾಡಬೇಕೆಂದು ತೋರಲಿಲ್ಲ. ಆಗ ಅವರು ನನ್ನನ್ನು ಅವರೊಟ್ಟಿಗೆ ಬೇರೊಂದು ಬಸ್ನಲ್ಲಿ ಕರೆದುಕೊಂಡು ಹೋದರು. ಹೇಗೆ ನಮ್ಮ ಬಸ್ ಗೆಳೆತನ ನಮ್ಮ ಕಷ್ಟದ ಸಮಯದಲ್ಲಿ ಸಹಾಯವಾಯಿತು.

ಒಟ್ಟಾರೆಯಾಗಿ ನಾನು ಆರಂಭದಲ್ಲಿ ಬಸ್ ಪಯಣವನ್ನು ಇಷ್ಟ ಪದದಿರಲು ಕಾರಣ ನಾನು ಪ್ರತಿ ಕ್ಷಣವನ್ನು ಅನುಭವಿಸದೇ ಇರುವುದು. ಈಗ ನಾನು ಕಂಡುಕೊಂಡ ಅಂಶವೇನೆಂದರೆ ನಮ್ಮ ಸಂತೋಷ ದುಃಖಗಳು ಅವಲಂಬಿಸಿರುವುದು ನಮ್ಮ ಮನೋಭಾವದ ಮೇಲೆ. ಅಂದರೆ ನಾವು ಪ್ರತಿಯೊಂದು ಕ್ಷಣವನ್ನು ಅನುಭವಿಸಲು ಕಲಿತರೆ ನಮ್ಮ ಜೀವನ ಸುಖಕರವಾಗಿರುತ್ತದೆ.

----- ರಮ್ಯ ರಾವ್