ಬುಧವಾರ, ಮಾರ್ಚ್ 24, 2010
ನಮ್ಮ ಇಂದಿಗಾಗಿ ತಮ್ಮ ನಾಳೆಗಳನ್ನು ಬಲಿಕೊಟ್ಟವರು - Courtesy : http://thatskannada.com
"ಮೇರಾ ರಂಗ್ ದೇ , ಮಾಯಿ ರಂಗ್ ದೇ, ಮೇರಾ ರಂಗ್ ದೇ ಬಸಂತೀ ಚೋಲಾ..." ಹಾಗೊಂದು ಹಾಡು ಲಾಹೋರ್ ನ ಜೈಲಿನ ಗೋಡೆ ಗೋಡೆ ಗಳಲ್ಲಿ ಅನುರಣಿಸುತ್ತಾ, ಕೇಳಿದವರ ಎದೆಯಲ್ಲಿ ಹೊಸತೊಂದು ಭಾವ ಸೃಷ್ಟಿಸುತ್ತಾ ಸೆರೆಮನೆಯ ಎಲ್ಲೆಯನ್ನು ದಾಟಿ ಮಾರ್ದನಿಸುತ್ತಿತ್ತು. ಆ ಹಾಡು ಲಾಹೋರಿನ ಜೈಲಿನಲ್ಲಿ ಖೈದಿಗಳಿಗಾಗಿ ಏರ್ಪಡಿಸಿದ್ದ ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮದ್ದಾಗಲಿ, ಸಂಗೀತ ಗೋಷ್ಠಿಯದ್ದಾಗಲಿ ಆಗಿರಲಿಲ್ಲ. ದೇಶಭಕ್ತಿಯ ಮಹಾಪರಾಧಕ್ಕಾಗಿ ನೇಣಿನ ಶಿಕ್ಷೆಗೆ ಒಳಗಾದ ಮೂವರು ಭಾರತೀಯ ಯುವಕರು ತಮ್ಮ ಬಲಿದಾನದ ಸಮಯ ಹತ್ತಿರವಾಯಿತೆಂದು ಸಂಭ್ರಮದಿಂದ ಆನಂದದಿಂದ ಹೇಳತೊಡಗಿದ್ದ ಹಾಡದು. ಸಾಯಲು ಹೊರಟವರಿಂದ ಸಂಭ್ರಮದ ಹಾಡು!
ತಾಯ ವಿಮೋಚನೆಗಾಗಿ, ಸ್ವಾತಂತ್ರ್ಯದ ಕನಸು ಕಂಡ ಆ ಮೂವರು ಭಾರತೀಯ ಯುವಕರಿಗೆ ಬ್ರಿಟಿಷ್ ಸರ್ಕಾರ ನೀಡಿದ್ದು ಗಲ್ಲು ಶಿಕ್ಷೆಯ ಉಡುಗೊರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಮರುದಿನ ಗಲ್ಲಿಗೇರಿಸಬೇಕಿತ್ತಾದರೂ ದೇಶಾಭಿಮಾನಿಗಳ ಪ್ರತಿಭಟನೆಗೆ ಹೆದರಿ ಬ್ರಿಟಿಷ್ ಸರ್ಕಾರ ಒಂದು ದಿನ ಮುಂಚೆಯೇ ಅವರನ್ನು ನೇಣಿ ಗೇರಿಸಲು ನಿರ್ಧರಿಸಿತ್ತು. ಸೆರೆಮನೆಯ ಅಧಿಕಾರಿಗಳು ಆ ಯುವಕರಿಗೆ ಈ ವಿಷಯ ತಿಳಿಸಿದಾಗ ಅವರಿಗೋ ಅತ್ಯಾನಂದ. ಆ ಮೂವರು ಗೆಳೆಯರಲ್ಲೂ ಪೈಪೋಟಿ - ತಮ್ಮಲ್ಲಿ ಮೊದಲು ಗಲ್ಲಿಗೇರುವ ಅವಕಾಶ ಯಾರದಿರಬೇಕು ಎಂಬ ಸಲುವಾಗಿ! ಅವರಿಗದು ಮಾತೃಭೂಮಿಯ ಮುಕ್ತಿಗಾಗಿ ಬಲಿದಾನಗೈಯ್ಯುವ ಭಾಗ್ಯ!
ಪ್ರತ್ಯಕ್ಷ ಸಾವಿನ ಎದುರು ನಿಂತಾಗಲೂ ಅವರಲ್ಲಿ ಭಯದ ಲವಲೇಶವೂ ಇಲ್ಲ. ಗಲ್ಲಿನ ವೇದಿಕೆ ಏರಿದಾಗಲೂ ಮುಖದಲ್ಲಿ ನಗು. ಇನ್ನು ಕೆಲವೇ ಕ್ಷಣಗಳಲ್ಲಿ ತಮ್ಮ ಜೀವ ತೆಗೆವ ನೇಣಿನ ಕುಣಿಕೆಯನ್ನು ಅವರು ಚುಂಬಿಸಿದರು. ಮನದಲ್ಲಿ ಅದೇನನ್ನೋ ಸಾಧಿಸಿದ ತೃಪ್ತಿ. ಮೊಗದಲ್ಲಿ ಚೈತನ್ಯದ ಚಿಲುಮೆ. ಸಾಯಲು ಹೊರಟವರ ಮುಖದಲ್ಲಿ ನಗು. ಬ್ರಿಟಿಷ್ ಅಧಿಕಾರಿಗಳಿಗೆ ಅತ್ಯಾಶ್ಚರ್ಯ. ಅಲ್ಲಿದ್ದವರು ಐದು ಮಂದಿ ಬ್ರಿಟಿಷ್ ಅಧಿಕಾರಿಗಳು. ಒಬ್ಬ ಬ್ರಿಟಿಷ್ ಅಧಿಕಾರಿ ಕೇಳಿದ 'ಯಾಕೆ ನಗುತ್ತಿದ್ದೀರಿ?' ಬಲಿದಾನಕ್ಕೆ ಸಿದ್ಧನಾದ ಯುವಕರಲ್ಲಿ ಒಬ್ಬ ಹೇಳಿದ "ಸಾರ್ ನೀವು ಅದೃಷ್ಟವಂತರು!" ಬ್ರಿಟಿಷ್ ಅಧಿಕಾರಿಗೆ ಮತ್ತಷ್ಟು ಅಚ್ಚರಿ . 'ಕ್ಷಣದಲ್ಲಿ ಹೆಣವಾಗಿ ಉರುಳುವ ನೀವು ನಮ್ಮ ಅದೃಷ್ಟವನ್ನೇಕೆ ಹೊಗಳ್ತೀರಿ?' ಆತನ ಪ್ರಶ್ನೆ. ಅದಕ್ಕೆ ಆ ಭಾರತೀಯ ಯುವಕ ನಗುತ್ತಲೇ ಉತ್ತರಿಸುತ್ತಾನೆ. "ತನ್ನ ತಾಯ್ನಾಡಿನ ಮುಕ್ತಿಗಾಗಿ, ಸ್ವಾತಂತ್ರ್ಯದ ಕನಸಿಗಾಗಿ ಈ ನಾಡಿನ ಯುವಕ ಅದೆಷ್ಟು ಆನಂದದಿಂದ, ಸಂತೋಷದಿಂದ, ಸಂಭ್ರಮದಿಂದ ಬಲಿದಾನ ಮಾಡ್ತಾನೆ, ಅದನ್ನು ನೋಡುವ ಅದೃಷ್ಟ 30 ಕೋಟಿ ಭಾರತೀಯರಲ್ಲಿ ನಿಮಗೆ ಐದು ಜನರಿಗೆ ಮಾತ್ರ ಸಿಗ್ತಿರೋದು , ನೀವು ಅದೃಷ್ಟವಂತರು!"
ಎಂತಹ ತಾಕತ್ತಿನ ಮಾತದು. ಸಾವಿನ ಸಮ್ಮುಖದಲ್ಲೂ ಅಂದು ಹಾಗೆ ದಿಟ್ಟ ವಾಗಿ ಮಾತಾಡಿದವನು ನಮ್ಮೆಲ್ಲರ ಪ್ರೀತಿಯ ಸರ್ದಾರ್ ಭಗತ್ ಸಿಂಗ್. ಜತೆಗಿದ್ದವರು ಅವನಷ್ಟೇ ಉಜ್ವಲ ದೇಶಭಕ್ತಿ, ಸ್ವಾತಂತ್ರ್ಯದ ಕನಸನ್ನು ಎದೆಯೊಳಗಿಟ್ಟುಕೊಂಡಿದ್ದ ಸುಖದೇವ್ ಮತ್ತು ಶಿವರಾಂ ರಾಜಗುರು.
ಅಂದು 23 ಮಾರ್ಚ್ 1931. ಇನ್ನೂ ತಾರುಣ್ಯದ ಹೊಸ್ತಿಲಲ್ಲಿದ್ದ ಭಗತ್ ಸಿಂಗ್, ಸುಖದೇವ್, ರಾಜಗುರು ಈ ನಮ್ಮ ಭಾರತದ ದಾಸ್ಯ ವಿಮೋಚನೆಗಾಗಿ, ತಮ್ಮ ಮಾತೃಭೂಮಿಯ ಅಗಾಧ ಪ್ರೀತಿ, ಉಜ್ವಲ ದೇಶಭಕ್ತಿಯ ಕಾರಣಕ್ಕಾಗಿ ನಗುನಗುತ್ತಲೇ ನೇಣಿಗೇರಿದ ದಿನ. 'ಈ ದೇಶಕಾಗಿ ಸಾಯಲೂ ಸಿದ್ಧ' ಅನ್ನೋದು ಕೇವಲ ಮಾತಲ್ಲ, ಈ ದೇಶದ ಯುವಕರು ಮಾತೃಭೂಮಿಯ ಒಳಿತಿಗಾಗಿ ಸಾವಿಗೂ ಸವಾಲು ಹಾಕಬಲ್ಲರು ಎಂಬುದನ್ನು ಜಗತ್ತಿಗೇ ನಿರೂಪಿಸಿ ಸಾಧಿಸಿ ತೋರಿಸಿದ ದಿನ. ಅಂದು ಅವರಿಗಿದ್ದದ್ದು ಭಾರತದ ದಾಸ್ಯ ವಿಮೋಚನೆ ಹಾಗೂ ಸ್ವತಂತ್ರ ಭಾರತದ ಕನಸು ಮಾತ್ರ. ನಾವು ಸ್ವತಂತ್ರರಾಗಿ, ದಾಸ್ಯಮುಕ್ತರಾಗಿ ಇರುವ ಇಂದಿನ ಈ ದಿನಗಳಿಗಾಗಿ ಅವರು ತಮ್ಮ ಸುಂದರ ನಾಳೆಗಳನ್ನು ಬಲಿಕೊಟ್ಟಾಗ , ತಾಯ್ನಾಡಿಗಾಗಿ ನಗುನಗುತ್ತಾ ನೇಣಿಗೇರಿದಾಗ ಭಗತ್ ಸಿಂಗ್ ಗೆ ಕೇವಲ 23 ವರ್ಷ, ಸುಖದೇವ್ ಗೆ 27 ವರ್ಷ ಹಾಗೂ ರಾಜಗುರು ಗೆ 25 ವರ್ಷ! ಯೌವನದ ಅಮಲು ಏರುವ ಹೊತ್ತಿನಲ್ಲೇ ತಮ್ಮೆಲ್ಲ ವೈಯಕ್ತಿಕ ಸುಖ ಸಂತೋಷಗಳನ್ನು ಬದಿಗಿರಿಸಿ ತಾಯಿ ಭಾರತೀಯ ಆನಂದ, ದಾಸ್ಯಮುಕ್ತಿಯನ್ನೇ ಜೀವನದ ಧ್ಯೇಯವಾಗಿಸಿ ಕೊಂಡವರು ಅವರು. ಜಗತ್ತಿನ ಸ್ವಾತಂತ್ರ್ಯ ಇತಿಹಾಸದಲ್ಲೇ ಅವರದು ಧೀರೋದಾತ್ತ ಅಧ್ಯಾಯ. ಇನ್ನೂ ಶತ ಶತಮಾನಗಳವರೆಗೆ ಭಾರತೀಯ ಯುವಕರಿಗೊಂದು ಆದರ್ಶ, ಅನುಪಮ ಮಾದರಿ, ಉಜ್ವಲ ಮಾರ್ಗದರ್ಶಿ.
ಮನೆಯಲ್ಲಿ ಮದುವೆ ಮಾಡುತ್ತೇನೆಂದಾಗ 'ಭಾರತದ ಸ್ವಾತಂತ್ರ್ಯವೇ ನನ್ನ ಮದುವೆ' ಎಂದು ಪತ್ರ ಬರೆದಿಟ್ಟು ಮನೆಯಿಂದ ಹೊರಬಂದು ಸಂಪೂರ್ಣ ತನ್ನನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡ ಭಗತ್, ದೇಶಾಭಿಮಾನವನ್ನೇ ತಮ್ಮ ರಕ್ತದ ಕಣಕಣ ದಲ್ಲಿ ತುಂಬಿಕೊಂಡು, ದೇಶಭಕ್ತಿಯನ್ನೇ ಉಸಿರಾಡುತ್ತಾ ಬಲಿದಾನದ ಸಮಯ ಬಂದಾಗ 'ನಾನು ಮೊದಲು ನಾನು ಮೊದಲು' ಎಂದು ಪೈಪೋಟಿಗಿಳಿದು ನಗು ನಗುತ್ತಾ ನೇಣಿ ಗೇರಿದ ಸುಖದೇವ್, ರಾಜಗುರು ... ಎಂತಹ ವೀರ ಪರಂಪರೆಯ ಮಕ್ಕಳು ನಾವು! ಆದರೆ ನಮ್ಮಲ್ಲೇಕಿಂದು ಆತ್ಮ ವಿಸ್ಮೃತಿಯ ಕರಿನೆರಳು? ನಾವಿಂದು ಬಲಿದಾನಗೈಯಬೇಕಿಲ್ಲ. ಮನೆ ಮಠ ಸಂಸಾರ ಬಿಟ್ಟು ಬರಬೇಕಿಲ್ಲ. ಯೌವನ, ಬದುಕನ್ನು ತ್ಯಾಗ ಮಾಡಬೇಕಿಲ್ಲ. ಆದರೆ ಕನಿಷ್ಟ ದೇಶವನ್ನು ಪ್ರೀತಿಸಲಾರೆವಾ? ದೇಶದ ಒಳಿತಿಗೆ ಸ್ಪಂದಿಸಲಾರೆವಾ? ಆ ವೀರ ಬಲಿದಾನಿಗಳ ಬಗ್ಗೆ ನಮ್ಮ ಮಕ್ಕಳಿಗೆ ಹೇಳಲಾರೆವಾ? ನಮ್ಮ ಈ ವೀರ ಪರಂಪರೆಯ ಬಗ್ಗೆ ಅಭಿಮಾನ ಮೂಡಿಸಲಾರೆವಾ? ಈ ದೇಶದ ರೈತ, ಗಡಿಕಾಯುವ ಸೈನಿಕರ ಕುರಿತು ಕಿಂಚಿತ್ತೂ ಕಾಳಜಿ ಹೊಂದಲಾರೆವಾ? ಅಷ್ಟೂ ಮಾಡಲಾಗದಿದ್ದರೆ ಸುಖಾಸುಮ್ಮನೆ ಈ ದೇಶಕ್ಕೆ ಬೈಯ್ಯೋದು ಬಿಟ್ಟು, ಈ ದೇಶವನ್ನು ಟೀಕಿಸೋದು ಬಿಟ್ಟು, ದೇಶಕ್ಕಾಗಿ ಕೆಲಸ ಮಾಡುತ್ತಿರುವವರ ಕಾಲೆಳೆಯೋದು ಬಿಟ್ಟು ಸುಮ್ಮನಿರಲಾರೆವಾ?
ದೇಶಕ್ಕಾಗಿ ನಾವೇನೂ ಮಾಡಬೇಕಿಲ್ಲ. ನನ್ನ ಹಳ್ಳಿ, ನನ್ನ ಊರು, ನನ್ನ ಜನ, ನನ್ನ ಸುತ್ತಮುತ್ತಲಿನ ಸಮಾಜಕ್ಕಾಗಿ ಸ್ಪಂದಿಸುವುದೇ, ತುಡಿಯುವುದೇ, ಸಮಾಜದ ಒಳಿತಿಗೆ ಶ್ರಮಿಸುವುದೇ ನಾವಿಂದು ಮಾಡಬೇಕಾದ ಕಾರ್ಯ. ಅದೇ ದೇಶ ಕಟ್ಟುವ ಕೆಲಸ.
ಭಗತ್ ಸಿಂಗ್,ರಾಜಗುರು , ಸುಖದೇವ್ ರ ಬಲಿದಾನದ ಈ ದಿನ ಅಂತಹದೊಂದು ಸಂಕಲ್ಪ ಮಾಡೋಣ. ಇಲ್ಲದಿದ್ದರೆ ಮತ್ತೊಂದು ಮಾರ್ಚ್ 23 ಬರುತ್ತದೆ, ಹೋಗುತ್ತದೆ. ಮತ್ತು ನಾವು ಒಂದೊಂದೇ ವರ್ಷ ಸಾವಿಗೆ ಹತ್ತಿರವಾಗುತ್ತಾ ಹೋಗುತ್ತೇವೆ . ಅಷ್ಟೇ!
Regards,
AnilKumar G K
Courtesy : http://thatskannada.com
ಬುಧವಾರ, ಫೆಬ್ರವರಿ 3, 2010
Jan 26: ನಾವು ಜವಾಬ್ದಾರರಲ್ಲ
ಮಂಗಳವಾರ, ಜನವರಿ 12, 2010
Naaveke heege?
ಶನಿವಾರ, ಅಕ್ಟೋಬರ್ 24, 2009
ಬುಧವಾರ, ಜೂನ್ 24, 2009
ನಮ್ಮೂರ ATM ನಮ್ಮ ಬಳಕೆಗೆ ತಾನೇ ??
ಐಸಿಐಸಿಐ ಬ್ಯಾ೦ಕ್ - customer.care@icicibank.com
ಎ.ಬಿ.ಎನ್ ಆಮ್ರೋ - in.service@in.abnamro.com
ಕಾರ್ಪೊರೇಷನ್ ಬ್ಯಾ೦ಕ್ -cb8803@corpbank.co.in
ಆಕ್ಸಿಸ್ ಬ್ಯಾ೦ಕ್ - szh@axisbank.com
ಬುಧವಾರ, ಮಾರ್ಚ್ 11, 2009
ನನ್ನ ಕಾಲೇಜಿನ ಮೊದಲ ದಿನಗಳು..
ಬುಧವಾರ, ಡಿಸೆಂಬರ್ 31, 2008
ಪಾಂಗಳ ದಿಂದ ಪಿ.ಪಿ.ಸಿ.
ನನಗೆ ಇದು ಹೊಸ ರೀತಿಯ ಅನುಭವ. ಅಂದರೆ ನಮ್ಮ ಮನಯಿಂದ ಬಸ್ ನಿಲ್ದಾಣ, ಅಲ್ಲಿಂದ ಬಸ್ನಲ್ಲಿ ಹೋಗುವುದು ಪ್ರತಿದಿನವೂ ನವೀನ ಅನುಭವ. ೧೦ km ಪಯಣ ನನ್ನ ಚಿಂತನೆಯನ್ನು ಸ್ವತ್ರಂತ್ರತೆಯತ್ತ ಕೊಂಡೊಯ್ಯುವ ದಾರಿಯಾಗಿಬಿಟ್ಟಿತು.
ಆರಂಭದಲ್ಲಿ ಮನೆಯಿಂದ ರಸ್ತೆಯ ನಡುವಿನ ಚಿಕ್ಕ ಹಾಡಿಯನ್ನು ದಾಟುವುದೇ ಭಯವನ್ನು ಎದುರಿಸಿ ನಿಲ್ಲುವ ಮೊದಲ ಹೆಜ್ಜೆ ಆಗಿತ್ತು. ಒಂಟಿಯಾಗಿ ಅ ಹಾಡಿಯ ಹಾದಿಯಲ್ಲಿ ೧೦-೨೦ ಹೆಜ್ಜೆ ಯಾರ ದಾಟುವುದನ್ನು ಅರಗಿಸಿ ಕೊಳ್ಳ ಬೇಕಾಗಿತ್ತು . ನನ್ನೊಂದಿಗೆ ಮತ್ತೊಬ್ಬರು ಬೇಕೆನಿಸುತಿತ್ತು. ಆದರೆ ನಂತರದಲ್ಲಿ ನಾನು ಒಂಟಿತನವನ್ನು ಹಿಮ್ಮೆಟ್ಟಿಸುವ ಮಾರ್ಗವನ್ನು ಕಂಡುಕೊಂಡೆ. ಅಲ್ಲಿಂದಲೇ ಹೊಸ ವಿಚಾರಗಳ ಬಗ್ಗೆ ಚಿಂತಿಸುವುದು, ಅದರೊಂದಿಗೆ ಯಾವುದಾದರು ಹಾಡು ಹೇಳಿಕೊಂಡು ಹೋಗಲು ಆರಂಭಿಸಿದೆ. ಇದರಿಂದ ನನಗೆ ಅನೇಕ ವಿಷಯಗಳ ಬಗ್ಗೆ ಹೊಸ ಯೋಚನೆಗಳು ಮಾಡುತ್ತಿದ್ದವು. ಅದಲ್ಲದೆ ಹಾಡು ಹೇಳುವುದರಿಂದ ನನ್ನ ಸಂಗೀತ ಅಭ್ಯಾಸವು ಸಾಧ್ಯವಾಯಿತು. ಹಸಿರು ವನರಾಶಿಯ ನಡುವೆ ಎದೆಯಾಳದಿಂದ ಹಾಡು ಬರುವುದೇ ನನಗೆ ರೋಮಾಂಚನ ನೀಡಲಾರಂಭಿಸಿತು. ನಮ್ಮ ದೇಶ ಎಂತಹ ಹಸಿರು ಸಂಪತ್ತನ್ನು ಹೊಂದಿದೆ ಎಂದು ಹೆಮ್ಮೆಯಗುತಿತ್ತು. ಕೊನೆಗೆ ಆ ಭಯಂಕರ ಹಾಡಿ ನನ್ನ ದೈನಂದಿನ ಜೀವನದ ಒಂದು ಸುಂದರ ಭಾಗವಾಯಿತು. ಆದರೆ ಈ ಸುಂದರತೆಗೆ ದೃಷ್ಟಿ ಬಿದ್ದಿತು. ಒಂದು ದಿನ ಸಾಯಂಕಾಲ ಕೆಲವೊಂದು ಮರಗಳು ಜೀವ ಕಳೆದು ಕೊಂಡು ಧರೆಶಾಯಿಯಾಗಿದ್ದವು. ತುಂಬ ಬೇಸರವಾಯಿತು. ಹಸಿರೆ ನಮ್ಮ ಉಸಿರಾಗಿರುವಾಗ ಅದನ್ನೇ ನಾಶಪಡಿಸುವ ಜನರ ಕ್ರೂರ ಮನಸ್ಸನ್ನು ಕಂಡು ಕೋಪವು ಬಂದಿತು. ಆದರೆ ನಾನು ಆ ಸಂದರ್ಭದಲ್ಲಿ ಅಸಹಯಕಾಳಗಿದ್ದೆ. ಇಂಥಹ ಅಸಹಾಯಕತೆಗಳನ್ನು ಮೌನವಾಗಿ ಅನುಭವಿಸುವುದನ್ನು ಅಭ್ಯಾಸ ಮಾಡಿಕೊಳ್ಳದೆ ಬೇರೆ ದಾರಿಯು ಸದ್ಯಕ್ಕೆ ಕಾಣುತ್ತಿಲ್ಲ! ಆದರೆ ಎಲ್ಲಿಯವರೆಗೆ ಈ ಅಭ್ಯಾಸ?
ನಂತರ ಬಸ್ನಲ್ಲಿ ಕಾಲೇಜ್ ಗೆ ಹೋಗುವುದು ನನ್ನ ಜೀವನದಲ್ಲೇ ಹೊಸತು. ಬಾಲ್ಯದಿಂದ ನನ್ನ ಶಾಲೆ ಸಮೀಪದಲ್ಲೇ ಇದ್ದುದರಿಂದ ನನಗೆ ಈ ಪ್ರಯಾಣದ ಅನುಭವವಿರಲಿಲ್ಲ. ಆರಂಭದಲ್ಲಿ ನನಗೆ ಭಯ ಕಾಡತೊಡಗಿತ್ತು. ಅಷ್ಟೆ ಅಲ್ಲದೆ ಒಂದು ರೀತಿಯ ಹಿಂಜರಿಕೆ ಇತ್ತು. ಈ ಭಯ ಹಿಂಜರಿಕೆಗಳೇ ಅ ಬಸ್ ಪಯಣದ ಅನುಭವನ್ನು ಆವರಿಸಿಬಿಟ್ಟಿತ್ತು. ಮತ್ತೆ ಆಗ ನಾನು ಒಬ್ಬಳೇ ಆಗಿದ್ದರಿಂದ ಮಾತಾಡಲು ಯಾರೊಬ್ಬರು ಸಿಗುತ್ತಿರಲಿಲ್ಲ. ಇತರರು ಅವರ ಗೆಳೆಯ-ಗೆಳತಿಯರೊಂದಿಗೆ ಮಾತನಾಡುವಾಗ ನಾನೆಲ್ಲೋ ಆ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೇನೆ ಅನಿಸುತಿತ್ತು. ಅದೇ ಮುಂದೆ ನನ್ನಲ್ಲಿ ಏಕಾಂಗಿತನದ ಭಾವನೆಯನ್ನು ಮತ್ತಷ್ಟು ವ್ರುದ್ಧಿಗೊಲಿಸಿತು. ಇದಕ್ಕೆ ತಾತ್ಕಾಲಿಕವಾಗಿ ಕಂಡುಕೊಂಡ ಪರಿಹಾರವೆಂದರೆ ನನ್ನ ಗೆಳತಿ ಬರುವ ಬಸ್ನಲ್ಲಿ ಬರುವುದು. ಇದರಿಂದ ನನಗೆ ಒಂಟಿತನ ದೂರವಾಯಿತು. ಅಲ್ಲದೆ ಬಸ್ನಲ್ಲಿ ಅವಳೊಂದಿಗೆ ಹೆಚ್ಚಿನ ವಿಷಯಗಳನ್ನು ಹಂಚಿಕೊಂಡಿದ್ದರಿಂದ ನನಗೆ ಅದಲು. ಆಗಿನಿಂದ ನನ್ನಲ್ಲಿ ಬಸ್ ಪ್ರಯಾಣದ ಬಗ್ಗೆ ಒಲವು ಮಾಡಿತು.
ಆದರೆ ಇಲ್ಲಿಗೆ ಮಾನಸಿಕ ಕ್ಲೇಶಗಳು ಮುಗಿಯಲಿಲ್ಲ. ಬಸ್ನಲ್ಲಿ ಅನೇಕ ಹುಡುಗರು ಜೋರಾಗಿ ಮಾತಾಡುತ್ತಾ, ಹುಡುಗಿಯರ ಕಡೆ ನೋಡಿ ಜೋರಾಗಿ ನಗುತ್ತಿದ್ದರು, ಆಗ ನನ್ನಲ್ಲಿ ನನ್ನ ಬಗ್ಗೆ ಕೀಳರಿಮೆ ಮೂಡಲು ಆರಂಭವಾಯಿತು. ಅಂದರೆ ನನ್ನ ಡ್ರೆಸ್ ಬಗ್ಗೆ ನಗುತ್ತಿರಬಹುದೆಂದು ಭಾವಿಸಿ ಖಿನ್ನಳಗುತ್ತಿದ್ದೆ. ಮನೆಯಲ್ಲಿಯೂ ನನಗೆ ಓದುವಾಗ ಕಾಟ ಕಾಡತೊಡಗಿತು. ಆದರೆ ಇದನ್ನು ನಾನು ಯಾರ ಬಳಿಯೂ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ನನ್ನ ಮನಸ್ಸನ್ನು ಗಟ್ಟಿ ಮಾಡಿಕೊಂಡೆ. ಅವರ ಕೆಟ್ಟ ದೃಷ್ಟಿಯ ಎದುರು ದಿಟ್ಟಿಸಿ ನಿಲ್ಲಲು ಆರಂಭಿಸಿದೆ. ಅಲ್ಲದೆ ನನ್ನಲ್ಲಿ ನನ್ನ ಓದಿನ ಬಗೆಗೆ ಆತ್ಮವಿಶ್ವಾಸ ಇದ್ದುದರಿಂದ ಅದು ನನ್ನಲ್ಲಿನ ಕೀಳರಿಮೆಯನ್ನು ಕಿತ್ತೆಸೆಯಿತು. ಅದರೊಂದಿಗೆ ನಾನು ಅನೇಕ ಗೆಳತಿಯರನ್ನು ಪರಿಚಯ ಮಾಡಿಕೊಳ್ಳತೊಡಗಿದೆ. ಇದರಿಂದಾಗಿ ಅವರ ವಿಚಾರಗಳು ನನಗೆ ದೊರೆಯಿತು. ಅಷ್ಟೆ ಅಲ್ಲದೆ ನನಗೆ ಅನೇಕ ಸಂದರ್ಭಗಳಲ್ಲಿ ನೆರವಾದರು. ಉದಾಹರಣೆಗೆ ಒಮ್ಮೆ ನಮ್ಮ ಬಸ್ ಮಧ್ಯದಲ್ಲಿ ಹಾಳಾಗಿ ನಿಂತಾಗ ನಂಗೆ ಕಾಲೇಜ್ ಗೆ ತಡವಾಗಿದ್ದರಿಂದ ಏನು ಮಾಡಬೇಕೆಂದು ತೋರಲಿಲ್ಲ. ಆಗ ಅವರು ನನ್ನನ್ನು ಅವರೊಟ್ಟಿಗೆ ಬೇರೊಂದು ಬಸ್ನಲ್ಲಿ ಕರೆದುಕೊಂಡು ಹೋದರು. ಹೇಗೆ ನಮ್ಮ ಬಸ್ ಗೆಳೆತನ ನಮ್ಮ ಕಷ್ಟದ ಸಮಯದಲ್ಲಿ ಸಹಾಯವಾಯಿತು.
ಒಟ್ಟಾರೆಯಾಗಿ ನಾನು ಆರಂಭದಲ್ಲಿ ಬಸ್ ಪಯಣವನ್ನು ಇಷ್ಟ ಪದದಿರಲು ಕಾರಣ ನಾನು ಪ್ರತಿ ಕ್ಷಣವನ್ನು ಅನುಭವಿಸದೇ ಇರುವುದು. ಈಗ ನಾನು ಕಂಡುಕೊಂಡ ಅಂಶವೇನೆಂದರೆ ನಮ್ಮ ಸಂತೋಷ ದುಃಖಗಳು ಅವಲಂಬಿಸಿರುವುದು ನಮ್ಮ ಮನೋಭಾವದ ಮೇಲೆ. ಅಂದರೆ ನಾವು ಪ್ರತಿಯೊಂದು ಕ್ಷಣವನ್ನು ಅನುಭವಿಸಲು ಕಲಿತರೆ ನಮ್ಮ ಜೀವನ ಸುಖಕರವಾಗಿರುತ್ತದೆ.
----- ರಮ್ಯ ರಾವ್